Telegram Join My Telegram WhatsApp Join My WhatsApp

ಬೇಸಿಗೆ ಆರೋಗ್ಯ ಸಲಹೆಗಳು 2026: ಉರಿ ಬಿಸಿಲಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 10 ಪ್ರಮುಖ ಟಿಪ್ಸ್

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾರ್ಚ್ ಆರಂಭದಲ್ಲೇ ಉರಿ ಬಿಸಿಲು ತೀವ್ರವಾಗಿದ್ದು, ಗರಿಷ್ಠ ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಹವಾಮಾನ ಬದಲಾವಣೆಗೆ ದೇಹ ಹೊಂದಿಕೊಳ್ಳಲು ಕೆಲವೊಮ್ಮೆ ಕಷ್ಟವಾಗಬಹುದು. ಇದರಿಂದ ನಿರ್ಜಲೀಕರಣ, ದಣಿವು, ತಲೆನೋವು, ಚರ್ಮ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ವಿಶೇಷವಾಗಿ ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು, ವ್ಯಾಪಾರಿಗಳು ಹಾಗೂ ನಿರಂತರವಾಗಿ ಹೊರಗೆ ಸಂಚರಿಸುವವರಿಗೆ ಬೇಸಿಗೆಯ ಬಿಸಿಲು ದೊಡ್ಡ ಸವಾಲಾಗುತ್ತದೆ. ಇನ್ನೂ ಕಚೇರಿಗಳಲ್ಲಿ ಏರ್‌ಕಂಡೀಷನ್‌ ವಾತಾವರಣದಲ್ಲಿ ಕೆಲಸ ಮಾಡುವವರು ಹೊರಗೆ ಬಂದಾಗ ತೀವ್ರ ಬಿಸಿಲಿನ ಪರಿಣಾಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೆಲವು ಸರಳ ಆರೋಗ್ಯ ಸಲಹೆಗಳನ್ನು ಅನುಸರಿಸುವುದರಿಂದ ಬೇಸಿಗೆಯಲ್ಲೂ ಆರೋಗ್ಯಕರ ಜೀವನ ನಡೆಸಬಹುದು.


ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ಸಾಮಾನ್ಯವಾಗಿ ದೇಹದಲ್ಲಿ ನಿರ್ಜಲೀಕರಣ (Dehydration) ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚು ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ದಿನಕ್ಕೆ 3–4 ಲೀಟರ್ ನೀರು ಕುಡಿಯುವವರು ಬೇಸಿಗೆಯಲ್ಲಿ ಅದನ್ನು 4–5 ಲೀಟರ್‌ವರೆಗೆ ಹೆಚ್ಚಿಸಿಕೊಳ್ಳುವುದು ಉತ್ತಮ.

ಬಾಯಾರಿಕೆ ಆಗದಿದ್ದರೂ ಸಹ ಸ್ವಲ್ಪಸ್ವಲ್ಪವಾಗಿ ನೀರು ಕುಡಿಯುತ್ತಿರಬೇಕು. ಹೊರಾಂಗಣದಲ್ಲಿ ಕೆಲಸ ಮಾಡುವವರು ನೀರಿನ ಬಾಟಲ್ ಕಡ್ಡಾಯವಾಗಿ ತೆಗೆದುಕೊಂಡು ಹೋಗುವುದು ಉತ್ತಮ.


ಗರಿಷ್ಠ ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ

ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಅಥವಾ 4 ಗಂಟೆಯವರೆಗೆ ಗರಿಷ್ಠ ತಾಪಮಾನ ದಾಖಲಾಗುತ್ತದೆ. ಕೆಲವೆಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೂ ಏರುತ್ತಿದೆ. ಈ ಸಮಯದಲ್ಲಿ ಹೊರಾಂಗಣ ಕೆಲಸಗಳು ಅಥವಾ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ.

ಬಿಸಿಲಿಗೆ ಹೊರ ಹೋಗಲೇಬೇಕಾದರೆ ಕೊಡೆ, ಟೋಪಿ ಅಥವಾ ಕ್ಯಾಪ್ ಹಾಗೂ ನೀರಿನ ಬಾಟಲ್ ಕಡ್ಡಾಯವಾಗಿ ಜೊತೆಗೆ ಇರಿಸಿಕೊಳ್ಳಬೇಕು. ಹತ್ತಿ ಬಟ್ಟೆ ಧರಿಸುವುದು ದೇಹಕ್ಕೆ ಆರಾಮ ನೀಡುತ್ತದೆ.


ಬೇಸಿಗೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕರ. ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಸೌತೆಕಾಯಿ ಮುಂತಾದ ಹಣ್ಣುಗಳು ಮತ್ತು ತರಕಾರಿಗಳು ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಸಹಾಯ ಮಾಡುತ್ತವೆ.

ಇದರ ಜೊತೆಗೆ ಎಳನೀರು, ಮಜ್ಜಿಗೆ, ನಿಂಬೆ ರಸ ಇತ್ಯಾದಿ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಹಣ್ಣು ತಿನ್ನಲು ಸಾಧ್ಯವಾಗದವರು ಹಣ್ಣಿನ ಜ್ಯೂಸ್ ಸೇವಿಸಬಹುದು.


ತಪ್ಪಿಸಬೇಕಾದ ಆಹಾರ ಮತ್ತು ಅಭ್ಯಾಸಗಳು

ಬೇಸಿಗೆಯಲ್ಲಿ ಕೆಲವು ಆಹಾರ ಪದಾರ್ಥಗಳನ್ನು ನಿಯಂತ್ರಿಸುವುದು ಉತ್ತಮ. ವಿಶೇಷವಾಗಿ:

  • ದಪ್ಪ ಬಟ್ಟೆ, ಜೀನ್ಸ್ ಧರಿಸುವುದನ್ನು ಕಡಿಮೆ ಮಾಡಬೇಕು

  • ಹೆಚ್ಚು ಎಣ್ಣೆ ಹಾಗೂ ಮಸಾಲೆ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು

  • ಬೇಕರಿ ಮತ್ತು ಅಂಗಡಿಗಳಲ್ಲಿ ಸಿಗುವ ಸಿದ್ಧ ತಂಪು ಪಾನೀಯಗಳನ್ನು ತಪ್ಪಿಸುವುದು ಉತ್ತಮ

  • ಚಿಕನ್, ಮಟನ್‌ ಮುಂತಾದ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬಾರದು

  • ಸಿಗರೇಟ್ ಹಾಗೂ ಮದ್ಯಪಾನ ದೇಹದ ತಾಪಮಾನ ಹೆಚ್ಚಿಸಬಹುದು


ಚರ್ಮ ಮತ್ತು ಮುಖದ ಆರೈಕೆ

ಬೇಸಿಗೆಯಲ್ಲಿ ಬಿಸಿಲು ಮತ್ತು ಧೂಳು ಚರ್ಮದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಹೊರಗೆ ಹೋಗುವಾಗ ಮುಖವನ್ನು ತೆಳುವಾದ ಬಟ್ಟೆಯಿಂದ ಮುಚ್ಚಿಕೊಳ್ಳುವುದು ಉತ್ತಮ. ಇದರಿಂದ ಧೂಳು ಹಾಗೂ ಬಿಸಿಲಿನ ಪರಿಣಾಮ ಕಡಿಮೆ ಆಗುತ್ತದೆ.

ಮುಖ, ಕೈ ಹಾಗೂ ಕತ್ತು ಭಾಗಗಳಿಗೆ ಸನ್‌ಸ್ಕ್ರೀನ್‌, ಮೊಯಿಸ್ಚರೈಸಿಂಗ್ ಕ್ರೀಮ್ ಬಳಸಬಹುದು. ಆಗಾಗ ಕೈ, ಮುಖ ಹಾಗೂ ಕಾಲುಗಳನ್ನು ತೊಳೆಯುವುದು ಚರ್ಮ ಆರೋಗ್ಯಕ್ಕೆ ಸಹಾಯಕ.


ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ

ಬಿಸಿಲಿನ ತಾಪದಿಂದ ತಲೆಸುತ್ತು, ದಣಿವು, ವಾಂತಿ ಅಥವಾ ದೇಹದ ತಾಪಮಾನ ಹೆಚ್ಚಾದರೆ ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು.

ತುರ್ತು ಪರಿಸ್ಥಿತಿಯಲ್ಲಿ 108 ಅಥವಾ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು.


ಪ್ರಾಣಿ–ಪಕ್ಷಿಗಳಿಗೆ ನೀರು ಒದಗಿಸಿ

ಬೇಸಿಗೆಯಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರಿನ ಕೊರತೆ ಉಂಟಾಗಬಹುದು. ಸಾಧ್ಯವಾದರೆ ಮನೆ ಅಥವಾ ಕಚೇರಿ ಸುತ್ತಮುತ್ತ ನೀರಿನ ಪಾತ್ರೆ ಇಟ್ಟು ಪ್ರಾಣಿ–ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸುವುದು ಮಾನವೀಯ ಕರ್ಮ.